ಅಂಗೈಯಲ್ಲೇ ಟೂರಿಸ್ಟ್ ಆಡಿಯೊ ಗೈಡ್
Posted on February 7, 2018 by Pinakin App
ಪ್ರವಾಸಿ ತಾಣಗಳ ಮೊಬೈಲ್ ಮಾರ್ಗದರ್ಶಿ ಆ್ಯಪ್ | ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರೋತ್ಸಾಹ
ಚಾಣಕ್ಯ ಎಂ. ನೀಲಕಂಠನಹಳ್ಳಿ ಮೈಸೂರು
ರಾಜ್ಯದ ಪ್ರವಾಸಿ ತಾಣಗಳ ಕುರಿತ ಆಡಿಯೊ ಕ್ಲಿಪ್ಪಿಂಗ್ಗಳನ್ನು ಇನ್ನು ಮುಂದೆ ಮೊಬೈಲ್ನಲ್ಲೇ ಉಚಿತವಾಗಿ ಕೇಳಬಹುದಾಗಿದೆ.
ಪಿನಾಕಿನ್ ಹೆಸರಿನ ಪ್ರವಾಸಿತಾಣಗಳ ಆಡಿ ಗೈಡ್ ಅನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಯು ಪರಿಚಯಿಸುತ್ತಿದೆ. ಪ್ರವಾಸಿ ತಾಣಗಳಿಗೆ ಹೋದಾಗ ಗೈಡ್ಗಳನ್ನು ಹುಡುಕಬೇಕೆಂಬ ಸಮಸ್ಯೆ ಇದರಿಂದ ತಪ್ಪುತ್ತದೆ. ಸದ್ಯ ರಾಜ್ಯದ ಹದಿನೈದು ಪ್ರವಾಸಿ ತಾಣಗಳು ಪಿನಾಕಿನ್ ಆ್ಯಪ್ನಲ್ಲಿ ಸೇರಿದ್ದು, ಇದರಲ್ಲಿ ಆಯಾ ಸ್ಥಳಗಳ ಕುರಿತ ಸೂಕ್ಷ್ಮ ಅಂಶಗಳು ದಾಖಲಾಗಿವೆ.
ಚೆನ್ನೈ ಮೂಲದ ಬೆಂಗಳೂರಿನ ಟೆಕ್ಕಿ ಶ್ರೀಕಾಂತ್ ಅಯ್ಯರ್ ಅವರು ಈ ಆ್ಯಪ್ಅನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರವಾಸೋದ್ಯಮಕ್ಕೆ ಈ ಆ್ಯಪ್ ಲಾಭ ತಂದುಕೊಡುವ ಕಾರಣ ಪಿಒಸಿ (ಪ್ರೂಫ್ ಆಫ್ ಕಾನ್ಸೆಪ್ಟ್) ಯೋಜನೆಯಡಿ ಈ ನವೋದ್ಯಮಕ್ಕೆ ಅನುದಾನ ನೀಡಲಾಗಿದೆ. ಸದ್ಯ ಮೈಸೂರು ಅರಮನೆ, ಬೇಲೂರಿನ ಚೆನ್ನಕೇಶವ ದೇಗುಲ, ಲಾಲ್ಬಾಗ್, ಬೆಂಗಳೂರಿನ ಸರಕಾರಿ ವಸ್ತುಸಂಗ್ರಹಾಲಯ ಕುರಿತ ಆಡಿಯೊ ಕ್ಲಿಪ್ಪಿಂಗ್ಗಳು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು ಭಾಷೆಯಲ್ಲಿ ಲಭ್ಯವಿದೆ.
ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಎರಡೂ ಮೊಬೈಲ್ಗಳಲ್ಲೂ ಈ ಆ್ಯಪ್ ಸುಲಭವಾಗಿ ಕೆಲಸ ಮಾಡಬಹುದು. ಪ್ಲೇ ಸ್ಟೋರ್ನಲ್ಲಿ ಪಿನಾಕಿನ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಸೈನ್ ಇನ್ ಆದರೆ, ನಾಲ್ಕರಲ್ಲಿ ನೀವಿಷ್ಟಪಡುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊಬೈಲ್ನಲ್ಲಿ ನೀವಿರುವ ಲೊಕೇಶನ್ಅನ್ನು ಆನ್ ಮಾಡಿಕೊಂಡರೆ ಸಮೀಪದಲ್ಲೇ ಇರುವ ಪ್ರವಾಸಿ ತಾಣಗಳು ಯಾವುವು ಎಂಬ ಬಗ್ಗೆ ಮಾಹಿತಿ ಸಿಗುತ್ತದೆ. ಜತೆಗೆ ಆ ಸ್ಥಳಗಳ ಕುರಿತ ಆಡಿಯೊ ಕ್ಲಿಪ್ಪಿಂಗ್ಗಳೂ ಲಭ್ಯವಿದೆ. ಆಡಿಯೊಗಳನ್ನು ಡೌನ್ಲೋಡ್ ಮಾಡಬಹುದು ಅಥವಾ ಆನ್ಲೈನ್ನಲ್ಲೂ ಕೇಳಬಹುದಾಗಿದೆ.
ಅರಮನೆಯೇ ಹೈಲೈಟ್ :
ಮೈಸೂರಿನ ಅಂಬಾವಿಲಾಸ ಅರಮನೆಯೇ ಈ ಆ್ಯಪ್ನ ಹೈಲೈಟ್ ಆಗಿದೆ. ಅರಮನೆ ಸಂಪೂರ್ಣ ಪ್ರವಾಸ ಹಾಗೂ ಮಿನಿ ಪ್ರವಾಸ ಎಂಬ ಎರಡು ಭಾಗಗಳು ಆ್ಯಪ್ನಲ್ಲಿವೆ. ಸಂಪೂರ್ಣ ಪ್ರವಾಸದಲ್ಲಿ ಮೈಸೂರು ಅರಮನೆ ಇತಿಹಾಸ, ಹಳೆಯ ಅರಮನೆ ಸುಟ್ಟುಹೋದ ಕಥೆ, ನಾಡ ದೇವತೆ ಚಾಮುಂಡಿ ದೇವಿ, ಕಲ್ಯಾಣ ಮಂಟಪ, ಕುಸ್ತಿ ಅಂಗಳ, ಗೊಂಬೆ ಮನೆ, ಚಿನ್ನದ ಅಂಬಾರಿ, ಕೃಷ್ಣರಾಜ ಒಡೆಯರ್ ಶಿಲ್ಪ, ಸಾರ್ವಜನಿಕ ದರ್ಬಾರ್ ಹಾಲ್, ಖಾಸಗಿ ದರ್ಬಾರ್, ಹೀಗೆ ಸಮಗ್ರ ಮಾಹಿತಿ ಕುರಿತ 28 ನಿಮಿಷಗಳ ಆಡಿಯೊ ಲಭ್ಯವಿದೆ.
ಮಿನಿ ಪ್ರವಾಸದಲ್ಲಿ ಮುಖ್ಯವಾದ ಸ್ಥಳಗಳ ಪರಿಚಯ ಇರುವ 15 ನಿಮಿಷಗಳ ಆಡಿಯೊ ಇದೆ. ಸಂಪೂರ್ಣ ಪ್ರವಾಸವನ್ನು 90 ನಿಮಿಷ ಹಾಗೂ ಮಿನಿ ಪ್ರವಾಸವನ್ನು 50 ನಿಮಿಷಗಳಲ್ಲಿ ಮುಗಿಸಬಹುದು ಎಂಬ ಮಾಹಿತಿ ಕೂಡ ಇದೆ.
ಲಾಲ್ಬಾಗ್ನಲ್ಲಿರುವ ಸಸ್ಯಗಳು, ಪುಷ್ಪ ಗಡಿಯಾರ, ಗುಲಾಬಿ ತೋಟ, ಲಾಲ್ಬಾಗ್ ಕೆರೆ ಮೊದಲಾದ ಸ್ಥಳಗಳ ಕುರಿತ ಆಡಿಯೊ ಕೂಡ ಲಭ್ಯವಿದೆ. ಇನ್ನು ಬೇಲೂರು ಶ್ರೀ ಚೆನ್ನಕೇಶವನ ದೇಗುಲದ ಇತಿಹಾಸ, ಹೊಯ್ಸಳ ಸಾಮ್ರಾಜ್ಯದ ಇತಿಹಾಸ ದೇವಾಲಯದ ಶಿಲ್ಪಕಲೆಗಳ ಪರಿಚಯವನ್ನೂ ಈ ಆ್ಯಪ್ ಮಾಡಿಕೊಡುತ್ತದೆ.
ಇನ್ನಷ್ಟು ಸ್ಥಳಗಳು :
ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮೊದಲಾದ ಸ್ಥಳಗಳನ್ನು ಈ ಆ್ಯಪ್ಗೆ ಸೇರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಕ್ರಮೇಣವಾಗಿ ರಾಜ್ಯದ ನೂರಕ್ಕೂ ಹೆಚ್ಚು ಪ್ರವಾಸಿ ತಾಣಗಳ ಆಡಿಯೊ ಗೈಡ್ಅನ್ನು ಆ್ಯಪ್ನಲ್ಲಿ ಲಭ್ಯವಾಗುವಂತೆ ಮಾಡುವುದು ಆ್ಯಪ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಅಯ್ಯರ್ ಅವರ ಮಹದಾಸೆ.
40 ಸಾವಿರ ಡೌನ್ಲೋಡ್ಗಳು :
ಈಗಾಗಲೇ 40 ಸಾವಿರ ಮಂದಿ ಪಿನಾಕಿನ್ ಆ್ಯಪ್ಅನ್ನು ಡೌನ್ಲೋಡ್ ಮಾಡಿಕೊಂಡಿದ್ದು, ಗೂಗಲ್ ಪ್ಲೇಸ್ಟೋರ್ ರೇಟಿಂಗ್ನಲ್ಲಿ 4.5 ಅಂಕ ಸಿಕ್ಕಿದೆ.
ಲೋಕಲ್ ಟೂರಿಸ್ಟ್ಗಳೇ ಟಾರ್ಗೆಟ್ :
ಒಂದು ಅಂದಾಜಿನ ಪ್ರಕಾರ ವರ್ಷಕ್ಕೆ ಎರಡು ಲಕ್ಷ ವಿದೇಶಿ ಪ್ರವಾಸಿಗರು ರಾಜ್ಯಕ್ಕೆ ಭೇಟಿ ನೀಡುತ್ತಾರೆ. 20 ಲಕ್ಷಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ಕರ್ನಾಟಕದ ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಿದ್ದಾರೆ. ಹಾಗಾಗಿ ಸ್ಥಳೀಯ ಪ್ರವಾಸಿಗರನ್ನೇ ಗುರಿಯಾಗಿಟ್ಟುಕೊಂಡು ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
"ಪ್ರತಿ ಭಾಷೆಯಲ್ಲಿ ಆಡಿಯೊ ಕ್ಲಿಪ್ಗಳನ್ನು ರೆಕಾರ್ಡ್ ಮಾಡುವಾಗ ಆಯಾ ಭಾಷೆಯ ಪ್ರಸಿದ್ಧ ವಾಯ್ಸ್ಓವರ್ ಆರ್ಟಿಸ್ಟ್ಗಳನ್ನೇ ಬಳಸಲಾಗಿದೆ. ಪರಿಣತರು, ಇತಿಹಾಸಕಾರರು ನಮ್ಮ ಬೆನ್ನಿಗೆ ನಿಂತು ಸಹಾಯ ಮಾಡಿದ್ದಾರೆ. ರಾಜ್ಯ ಸರಕಾರವು ನಮ್ಮ ಆ್ಯಪ್ಅನ್ನು ಗುರುತಿಸಿ ಪ್ರೋತ್ಸಾಹಿಸಿರುವುದು ಸಾಧನೆಗೆ ಒಂದು ಮೈಲುಗಲ್ಲು ಸಿಕ್ಕಂತಾಗಿದೆ."
– ಶ್ರೀಕಾಂತ್ ಅಯ್ಯರ್, ವ್ಯವಸ್ಥಾಪಕ ನಿರ್ದೇಶಕ, ಪಿನಾಕಿನ್
"ಮೈಸೂರು ಅರಮನೆಯ ಆವರಣದಲ್ಲೇ ಪಿನಾಕಿನ್ ಮಾಹಿತಿ ಕೇಂದ್ರವನ್ನು ಆರಂಭಿಸಿ ಆ್ಯಪ್ಅನ್ನು ಡೌನ್ಲೋಡ್ ಮಾಡಿಕೊಡಲಾಗುವುದು. ಅರಮನೆಯಲ್ಲಿ ಐದು ಉಚಿತ ವೈಫೈ ಕೇಂದ್ರಗಳಿರುವುದರಿಂದ ಆ್ಯಪ್ ಬಳಕೆ ಸುಲಭವಾಗಲಿದೆ."
– ಪಿ.ಎಸ್.ಸುಬ್ರಮಣ್ಯ, ಉಪನಿರ್ದೇಶಕರು, ಅರಮನೆ ಮಂಡಳಿ
ಲಿಂಕ್ :-
https://vijaykarnataka.indiatimes.com/district/mysuru/tourist-audio-guide/articleshow/62808225.cms